| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.

ಕಲಘಟಗಿ: ನರಿ ಕಡಿತದಿಂದ ರೈತ ಸಾವು ಪ್ರಕರಣ – ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಉನ್ನತಾಧಿಕಾರಿಗಳು.

ಕಲಘಟಗಿ / ಧಾರವಾಡ: ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ವೇಳೆ ನರಿ ದಾಳಿಗೊಳಗಾಗಿ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ ರೈತ ಗಣೇಶಪ್ಪ ಬಸಪ್ಪ ಬಾರಕೇರ (65) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಜಂಟಿ ಸ್ಥಳ ಪರಿಶೀಲನೆ ಹಾಗೂ ಮಹಜರು ನಡೆಸಿದೆ. ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ದುರಂತ ಘಟನೆಗೆ ಸಂಬಂಧಿಸಿದಂತೆ, ಸರ್ಕಾರದ ವನ್ಯಜೀವಿ ಪರಿಹಾರ ವಿತರಣೆಯಲ್ಲಿ ಎದುರಾಗಿದ್ದ ತಾಂತ್ರಿಕ ತೊಡಕುಗಳ ಬೆನ್ನಲ್ಲೇ ಈ ಮಹತ್ವದ ತನಿಖೆ ನಡೆದಿದೆ.
ಘಟನೆಯ ಹಿನ್ನೆಲೆ: ಸೋಮನಕೊಪ್ಪ ಗ್ರಾಮದ ರೈತ ಗಣೇಶಪ್ಪ ಬಾರಕೇರ ಅವರು ಆಗಸ್ಟ್ 17 2025 ರಂದು ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ನರಿ ದಾಳಿ ನಡೆಸಿತ್ತು. ಮುಖ, ಕೈ-ಕಾಲು ಸೇರಿದಂತೆ ದೇಹದ ಎಲ್ಲೆಡೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ತಕ್ಷಣವೇ ಅವರನ್ನು ಕಲಘಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಗಾಯದ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಸೆಪ್ಟೆಂಬರ್ 13 2025 ರಂದು ಮೃತಪಟ್ಟಿದ್ದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು.

ಪರಿಹಾರಕ್ಕಾಗಿ ಪತ್ನಿಯ ಅರ್ಜಿ – ಎಲ್ಲ ದಾಖಲೆಗಳಿದ್ದರೂ ವಿಳಂಬ:
ಪತಿಯ ಸಾವಿನಿಂದ ಕಂಗಾಲಾದ ಮೃತರ ಪತ್ನಿ ಶ್ರೀಮತಿ ಕಲ್ಲವ್ವ ಗಣೇಶಪ್ಪ ಬಾರಕೇರ ಅವರು ಸರ್ಕಾರದ ವನ್ಯಜೀವಿ ಸಾವು ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದರು. ಘಟನೆ ನಡೆದ ತಕ್ಷಣವೇ ವೈದ್ಯಕೀಯ ದಾಖಲೆಗಳು, ಮರಣೋತ್ತರ ಪರೀಕ್ಷೆ (Post-Mortem) ವರದಿ, ಜಿಲ್ಲಾ ಆರೋಗ್ಯಾಧಿಕಾರಿಗಳ (DHO) ಅಧಿಕೃತ ದೃಢೀಕರಣ ಪತ್ರ, ಪೊಲೀಸ್ ಠಾಣೆಯ ವರದಿ ಹಾಗೂ ಮರಣ ಪ್ರಮಾಣಪತ್ರ ಸೇರಿದಂತೆ ಅಗತ್ಯವಿರುವ ಪ್ರತಿಯೊಂದು ಅಧಿಕೃತ ದಾಖಲೆಗಳನ್ನು ಇಲಾಖೆಗೆ ಒದಗಿಸಲಾಗಿತ್ತು. ಆದರೆ, ಘಟನೆ ನಡೆದು ತಿಂಗಳುಗಳೇ ಕಳೆದರೂ ಸ್ಥಳೀಯ ಕಚೇರಿ ಮಟ್ಟದಲ್ಲಿ ಕೇವಲ ತಾಂತ್ರಿಕ ಆಕ್ಷೇಪಣೆಯ ನೆಪವೊಡ್ಡಿ ಪರಿಹಾರ ವಿತರಿಸದೆ ವಿಳಂಬ ಮಾಡಲಾಗಿತ್ತು. ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಸಕಾಲದಲ್ಲಿ ಪರಿಹಾರ ತಲುಪದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ನ್ಯಾಯಕ್ಕಾಗಿ ಮೇಲ್ಮನವಿ – ಬೆಂಗಳೂರು ಕಚೇರಿಯ ಆದೇಶ: ಸ್ಥಳೀಯ ಮಟ್ಟದಲ್ಲಿ ಕಡತ ವಿಲೇವಾರಿಯಾಗದ ಹಿನ್ನೆಲೆಯಲ್ಲಿ, ನೊಂದ ಪತ್ನಿ ಶ್ರೀಮತಿ ಕಲ್ಲವ್ವ ಬಾರಕೇರ ಅವರು ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (PCCF - ವನ್ಯಜೀವಿ) ಹಾಗೂ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (DCF) ಲಿಖಿತ ಮೇಲ್ಮನವಿ ಸಲ್ಲಿಸಿದ್ದರು. ಜೊತೆಗೆ ಈ ಕುರಿತು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೂ (CCF) ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯು, ನಿಯಮಾನುಸಾರ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ವಿಭಾಗಕ್ಕೆ ಅಧಿಕೃತ ನಿರ್ದೇಶನ ನೀಡಿತ್ತು.
ಸ್ಥಳಕ್ಕೆ ಧಾವಿಸಿ ಜಂಟಿ ಪರಿಶೀಲನೆ ನಡೆಸಿದ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿಗಳ ತಂಡ: ಉನ್ನತ ಅಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ, ದಿನಾಂಕ: 04-11-2026 ರಂದು ಧಾರವಾಡ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ACF), ಉಪ ವಲಯ ಅರಣ್ಯಾಧಿಕಾರಿಗಳು (DyRFO) ಹಾಗೂ ಕಲಘಟಗಿ ವಲಯ ಅರಣ್ಯಾಧಿಕಾರಿಗಳ (RFO) ಕಚೇರಿ ಸಿಬ್ಬಂದಿ ಸೋಮನಕೊಪ್ಪದ ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿದರು. ಘಟನೆ ನಡೆದ ಜಮೀನಿನ ಪರಿಸರ ಹಾಗೂ ನರಿ ದಾಳಿ ನಡೆಸಿದ ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿದ ಅಧಿಕಾರಿಗಳು, ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹಾಗೂ ಗ್ರಾಮಸ್ಥರಿಂದ ಸಮಗ್ರ ಮಾಹಿತಿ ಪಡೆದು ಜಂಟಿ ಸ್ಥಳ ಪರಿಶೀಲನಾ ವರದಿ (ಮಹಜರು) ದಾಖಲಿಸಿಕೊಂಡರು.

ತ್ವರಿತ ಪರಿಹಾರ ಬಿಡುಗಡೆಗೆ ಗ್ರಾಮಸ್ಥರ ಆಗ್ರಹ: ಮೃತ ರೈತ ಗಣೇಶಪ್ಪ ಬಾರಕೇರ ಅವರ ಕುಟುಂಬವು ಅತ್ಯಂತ ಬಡತನದಲ್ಲಿದ್ದು, ಸಂಸಾರದ ಆಧಾರಸ್ತಂಭವನ್ನೇ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದೆ. ಈಗ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೇ ಖುದ್ದು ಸ್ಥಳ ಪರಿಶೀಲನೆ ನಡೆಸಿ ಮಹಜರು ಪೂರ್ಣಗೊಳಿಸಿರುವುದರಿಂದ, ಇಲಾಖೆಯು ಇ-ಪರಿಹಾರ ತಂತ್ರಾಂಶದ ಮೂಲಕ ತಕ್ಷಣವೇ ಸಾವಿನ ಪರಿಹಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನೊಂದ ಕುಟುಂಬಕ್ಕೆ ಶೀಘ್ರವೇ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.