ಕಲಘಟಗಿ: ನರಿ ಕಡಿತದಿಂದ ರೈತ ಸಾವು ಪ್ರಕರಣ – ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಉನ್ನತಾಧಿಕಾರಿಗಳು.
ಕಲಘಟಗಿ / ಧಾರವಾಡ: ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ವೇಳೆ ನರಿ ದಾಳಿಗೊಳಗಾಗಿ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ ರೈತ ಗಣೇಶಪ್ಪ ಬಸಪ್ಪ ಬಾರಕೇರ (65) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಜಂಟಿ ಸ್ಥಳ ಪರಿಶೀಲನೆ ಹಾಗೂ ಮಹಜರು ನಡೆಸಿದೆ. ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ದುರಂತ ಘಟನೆಗೆ ಸಂಬಂಧಿಸಿದಂತೆ, ಸರ್ಕಾರದ ವನ್ಯಜೀವಿ ಪರಿಹಾರ ವಿತರಣೆಯಲ್ಲಿ ಎದುರಾಗಿದ್ದ ತಾಂತ್ರಿಕ ತೊಡಕುಗಳ ಬೆನ್ನಲ್ಲೇ ಈ ಮಹತ್ವದ ತನಿಖೆ ನಡೆದಿದೆ. ಘಟನೆಯ ಹಿನ್ನೆಲೆ: ಸೋಮನಕೊಪ್ಪ ಗ್ರಾಮದ ರೈತ ಗಣೇಶಪ್ಪ ಬಾರಕೇರ ಅವರು ಆಗಸ್ಟ್ 17 2025 ರಂದು ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ನರಿ ದಾಳಿ ನಡೆಸಿತ್ತು. ಮುಖ, ಕೈ-ಕಾಲು ಸೇರಿದಂತೆ ದೇಹದ ಎಲ್ಲೆಡೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ತಕ್ಷಣವೇ ಅವರನ್ನು ಕಲಘಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಗಾಯದ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಸೆಪ್ಟೆಂಬರ್ 13 2025 ರಂದು ಮೃತಪಟ್ಟಿದ್ದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು. ಪರಿಹಾರಕ್ಕಾಗಿ ಪತ್ನಿಯ ಅರ್ಜಿ – ಎಲ್...