| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.

ಧಾರವಾಡ: ಡಿಸಿ, ಜಿ.ಪಂ ಸಿಇಒ ಆದೇಶಕ್ಕೂ ಕಿಮ್ಮತ್ತಿಲ್ಲ; ೧೪ ತಿಂಗಳು ಕಳೆದರೂ ಅಂಬ್ಲಿಕೊಪ್ಪದ ಬಡ ಕುಟುಂಬಗಳಿಗೆ ಸಿಗದ ವಿದ್ಯುತ್ ಮೀಟರ್!

ಸುದ್ದಿ ವರದಿ: ಧಾರವಾಡ (ಅಂಬ್ಲಿಕೊಪ್ಪ):
ಗ್ರಾಮೀಣ ಭಾಗದಲ್ಲಿ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಕಟ್ಟುನಿಟ್ಟಿನ ಆದೇಶವಿದ್ದರೂ, ಧಾರವಾಡ ಗ್ರಾಮೀಣ ಉಪವಿಭಾಗ-೨ ರ ಹೆಸ್ಕಾಂ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಅಂಬ್ಲಿಕೊಪ್ಪ ಗ್ರಾಮದ ೬ ಸ್ಥಳೀಯ ನಿವಾಸಿ ಕುಟುಂಬಗಳು ಬರೋಬ್ಬರಿ ೧೪ ತಿಂಗಳು ಕಳೆದರೂ ವಿದ್ಯುತ್ ಮೀಟರ್ ಇಲ್ಲದೆ ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ.

ಏನಿದು ಪ್ರಕರಣ? ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬ್ಲಿಕೊಪ್ಪ ಗ್ರಾಮದಲ್ಲಿ ೬ ಬಡ ಕುಟುಂಬಗಳು ಕಾನೂನುಬದ್ಧ ಶಾಶ್ವತ ಗುತ್ತಿಗೆ ಪತ್ರಗಳ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡು ವಾಸಿಸುತ್ತಿವೆ. ಹೊಸ ವಿದ್ಯುತ್ ಸಂಪರ್ಕಕ್ಕಾಗಿ ದಿನಾಂಕ:15-09-2025 ರಂದೇ ಹೆಸ್ಕಾಂ ಕಚೇರಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಸ್ಥಳೀಯ ಶಾಖಾಧಿಕಾರಿಗಳು ಮತ್ತು ಉಪವಿಭಾಗದ ಅಧಿಕಾರಿಗಳು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಡತವನ್ನು ಬಾಕಿ ಇಟ್ಟುಕೊಂಡು, "ಇ-ಸ್ವತ್ತು ತನ್ನಿ, ಹೊಸ ಕಂಬ ಹಾಕಬೇಕು, ₹೬೦ ರಿಂದ ₹೭೦ ಸಾವಿರ ಖರ್ಚಾಗುತ್ತದೆ" ಎಂಬ ಸಬೂಬುಗಳನ್ನು ಹೇಳುತ್ತಾ ಬಡ ಕುಟುಂಬಗಳನ್ನು ಅಲೆದಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಆದೇಶಕ್ಕೂ ಡೋಂಟ್ ಕೇರ್! ಹೆಸ್ಕಾಂ ಅಧಿಕಾರಿಗಳ ಈ ನಿರ್ಲಕ್ಷ್ಯದ ವಿರುದ್ಧ ಅರ್ಜಿದಾರರು ಜಿಲ್ಲಾಡಳಿತದ ಮೊರೆ ಹೋಗಿದ್ದರು. ಪರಿಣಾಮವಾಗಿ: ತಾಲ್ಲೂಕು ಪಂಚಾಯಿತಿ ಇಒ (ದಿನಾಂಕ:24-07-2026 ಮತ್ತು 04-09-2026) ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) (ದಿನಾಂಕ:14-08-2026) ಹೆಸ್ಕಾಂ ಅಧೀಕ್ಷಕ ಅಭಿಯಂತರರಿಗೆ ಪತ್ರ ಬರೆದು ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲು ಆದೇಶಿಸಿದ್ದರು. ಅಪರ ಜಿಲ್ಲಾಧಿಕಾರಿಗಳು (ADC) ಸಹ ದಿನಾಂಕ 22-09-2026 ರಂದು (ಪತ್ರ ಸಂ: ಸಿಆರ್-598/2026-27) ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ (MD) ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಇಷ್ಟೆಲ್ಲಾ ಉನ್ನತ ಅಧಿಕಾರಿಗಳ ಆದೇಶವಿದ್ದರೂ, ಶಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮನೆಗಳಿರುವುದನ್ನು ದೃಢಪಡಿಸಿದ ನಂತರವೂ ಕಡತವನ್ನು ಮುಂದಕ್ಕೆ ಸಾಗಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬುದು ಸ್ಥಳೀಯರ ದೂರಾಗಿದೆ.

ಕೆ.ಇ.ಆರ್.ಸಿ (KERC) ಆರ್‌ಟಿಐ ದಾಖಲೆಯಲ್ಲಿ ಬಯಲಾದ ಸತ್ಯ: ಅಧಿಕಾರಿಗಳ ಸಬೂಬುಗಳನ್ನು ಪ್ರಶ್ನಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ (KERC) ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅಧಿಕೃತ ದಾಖಲೆಗಳನ್ನು ಪಡೆಯಲಾಗಿದೆ. ಆಯೋಗದ 28-03-2024 ರ ಆದೇಶದಂತೆ: ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ವಿದ್ಯುತ್ ಸಂಪರ್ಕ ನೀಡುವುದು ಕಡ್ಡಾಯ. ಒಂದು ವೇಳೆ ಹೊಸ ಲೈನ್ ವಿಸ್ತರಣೆ ಅಗತ್ಯವಿದ್ದರೂ ಗರಿಷ್ಠ ೯೦ ದಿನಗಳೊಳಗೆ ಸಂಪರ್ಕ ಕಲ್ಪಿಸಲೇಬೇಕು. KERC ಪೂರೈಕೆ ಷರತ್ತುಗಳ ಕಲಂ 4.02(1)(ii)(a) ಪ್ರಕಾರ, ವಿದ್ಯುತ್ ಸಂಪರ್ಕಕ್ಕೆ ಮಾಲೀಕತ್ವದ ದಾಖಲೆ ಇಲ್ಲದಿದ್ದರೂ, ಕೇವಲ ಸ್ವಾಧೀನದ ಪುರಾವೆ (Proof of Occupancy) ಅಥವಾ ಮುಚ್ಚಳಿಕೆ ಪತ್ರ (Indemnity Bond - Annex-8) ನೀಡಿ ಸಂಪರ್ಕ ಪಡೆಯಲು ಅವಕಾಶವಿದೆ. ೭.೫ ಕಿ.ವ್ಯಾ (7.5 kW) ಒಳಗಿನ ಮನೆ ಬಳಕೆ ಸಂಪರ್ಕಕ್ಕೆ ಲೈಸೆನ್ಸ್‌ಡ್ ಕಂಟ್ರಾಕ್ಟರ್ (LEC) ಹೆಸರು ನಮೂದಿಸುವ ಷರತ್ತನ್ನೂ ಆಯೋಗವೇ ೨೦೧೮ ರ ತಿದ್ದುಪಡಿಯಲ್ಲಿ ರದ್ದುಪಡಿಸಿದೆ.

ಇಂದಿಗೂ ಕತ್ತಲಲ್ಲೇ ಜೀವನ: ಎಲ್ಲಾ ಕಾನೂನು ನಿಯಮಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶವಿದ್ದರೂ, ನವೆಂಬರ್ ೨೦೨೬ ಕಳೆಯುತ್ತಾ ಬಂದರೂ ಹೆಸ್ಕಾಂ ಗ್ರಾಮೀಣ ಉಪವಿಭಾಗ-೨ ರ ಅಧಿಕಾರಿಗಳು ಇಲ್ಲಿಯವರೆಗೂ ಅಧಿಕೃತ ಡಿಮ್ಯಾಂಡ್ ನೋಟ್ ನೀಡದೆ, ವಿದ್ಯುತ್ ಮೀಟರ್ ಅಳವಡಿಸದೆ ಸತಾಯಿಸುತ್ತಿದ್ದಾರೆ. ಮನೆಗಳಲ್ಲಿ ಶಾಲಾ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ರಾತ್ರಿ ವೇಳೆ ವಿಷಜಂತುಗಳ ಭೀತಿಯ ನಡುವೆ ಕತ್ತಲಲ್ಲಿ ದಿನ ದೂಡುವಂತಾಗಿದೆ. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು (MD) ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ತಕ್ಷಣ ವಿದ್ಯುತ್ ಮೀಟರ್ ಅಳವಡಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.